ಅಡಿಪಾಯ ತೆಗೆಯುವಾಗ ಸಿಕ್ಕಿತು ಬಾರೀ ಮೊತ್ತದ ನಿಧಿ! ನೋಡಲು ಮುಗಿಬಿದ್ದ ಜನ!

ಲಖನೌ: ನೂತನ ಮನೆ ನಿರ್ಮಿಸಲು ವ್ಯಕ್ತಿಯೊಬ್ಬ ಅಡಿಪಾಯ ತೆಗೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಮುಗ್ಗರಿಸಿ ಬೀಳಲು ಏನೆಂದು ನೋಡಿದಾಗ ಆತ 25 ಲಕ್ಷ ರೂ. ಮೌಲ್ಯ ಬೆಲೆ ಬಾಳುವ ಚಿನ್ನಾಭರಣ ಇರುವ ನಿಧಿಯ ಮೇಲೆ ಬಿದ್ದಿರುವುದು ಗೊತ್ತಾಗುತ್ತದೆ. ಆದರೆ, ಅದೃಷ್ಟದ ಬಾಗಿಲು ತೆರೆದ ಆಭರಣವು ವ್ಯಕ್ತಿಯ ಕೈ ಸೇರುವ ಬದಲು ಪೊಲೀಸರ ಪಾಲಾಗಿದ್ದು ವಿಪರ್ಯಾಸವೇ ಸರಿ.

 

ಈ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದ್ದು, ಪತ್ತೆಯಾದ ನಿಧಿಯನ್ನು ಪೊಲೀಸ್​ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 650 ಗ್ರಾಂ ಚಿನ್ನ ಮತ್ತು 4.53 ಕೆ.ಜಿ ಬೆಳ್ಳಿಯ ಆಭರಣಗಳು ಪತ್ತೆಯಾಗಿದ್ದು, ನೋಡಲು ಸುಮಾರು 100 ವರ್ಷದ ಹಳೆಯ ಆಭರಣ ರೀತಿ ಕಾಣುತ್ತಿದ್ದು, ಪುರಾತನ ಸ್ಥಳಗಳ ಗುರುತಾಗಿರಬಹುದೆಂದು ಹರ್ದೋಯ್​ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಅಲೋಕ್​ ಪ್ರಿಯದರ್ಶಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

 

ವ್ಯಕ್ತಿಗೆ ಸಂಬಂಧಿಸಿದ ಜಾಗದಲ್ಲಿ ಆಭರಣ ಪತ್ತೆಯಾದರೂ ಸೂಕ್ತ ದಾಖಲೆಗಳು ಇಲ್ಲದ ಕಾರಣ ವಶಕ್ಕೆ ಪಡೆದಿರುವುದಾಗಿ ಅಲೋಕ್​ ಪ್ರಿಯದರ್ಶಿ ಮಾಹಿತಿ ನೀಡಿದ್ದಾರೆ.

 

ಅಡಿಪಾಯ ತೆಗೆಯುವ ಸಂದರ್ಭದಲ್ಲಿ ನಿಧಿ ದೊರೆತ ಸುದ್ದಿ ಮೊದಲು ಊರಿನಲ್ಲಿ ವೈರಲ್​ ಆಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗಿ ಅದು ಪೊಲೀಸ್ ಕಿವಿಗೂ ತಲುಪಿದೆ. ಈ ಬಗ್ಗೆ ವ್ಯಕ್ತಿಯನ್ನು ವಿಚಾರಿಸಿದಾಗ ಪ್ರಾರಂಭದಲ್ಲಿ ಆ ರೀತಿ ನಡೆದಿಲ್ಲ ಎಂದು ಹೇಳಿದ್ದಾನೆ.​ ಬಳಿಕ ಶಿಕ್ಷೆಗೆ ಗುರಿಯಾಗಬಹುದೆಂದು ಹೆದರಿ ಪೊಲೀಸರಿಗೆ ನಿಧಿ ಪತ್ತೆಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪ್ರಿಯದರ್ಶಿ ತಿಳಿಸಿದ್ದಾರೆ.

 

ಕಾನೂನಿನ ಅಡಿಯಲ್ಲಿ ನಿಧಿ ವಿಚಾರಣೆ ಪ್ರಕ್ರಿಯೆ ಹೇಗೆ?

ಭೂಮಿಯನ್ನು ಅಗೆಯುವಾಗ ಯಾವುದೇ ಆಭರಣ ಅಥವಾ ಬೆಲೆಬಾಳುವ ವಸ್ತು ದೊರೆತರೆ ಅದನ್ನು ಕಾನೂನಿನ ಪ್ರಕಾರ ಅಥವಾ ಭಾರತೀಯ ಟ್ರೆಷರ್ ಟ್ರೋವ್ ಆಕ್ಟ್ 1878ರ ಅಡಿಯಲ್ಲಿ ನಿಧಿ ಎಂದು ಹೇಳಲಾಗುತ್ತದೆ. ಟ್ರೆಷರ್ ಟ್ರೋವ್ ಆಕ್ಟ್​ನ ಸೆಕ್ಷನ್​ 4ರ ಪ್ರಕಾರ ನಿಧಿ ಪತ್ತೆ ಮಾಡಿದವರು ನಿಧಿ ತಮ್ಮದೇ ಆಗಿದ್ದರೂ ವಿಚಾರವನ್ನು ಜಿಲ್ಲೆಯ ಕಂದಾಯ ಅಧಿಕಾರಿಗೆ ತಿಳಿಸಿ ನೋಟಿಸ್​ ಪಡೆಯಬೇಕು. ಅಲ್ಲದೆ, ಪತ್ತೆ ಮಾಡಿದ್ದನ್ನು ಕಂದಾಯ ಅಧಿಕಾರಿಗಳ ಮುಂದೆ ಜಮಾ ಮಾಡಿ ಅಗತ್ಯವಿದ್ದಾಗ ಅಧಿಕಾರಿಗಳ ಮುಂದೆ ಹಾಜರಾಗಬೇಕು.

 

ಸೆಕ್ಷನ್​ 11 ರ ಪ್ರಕಾರ ಅಧಿಕಾರಿಗಳು ವಿಚಾರಣೆಯ ಬಳಿಕ ನಿಧಿ ಬೇರೆ ಯಾರಿಗೂ ಸೇರಿದ್ದಲ್ಲ ಎಂದು ನಿರ್ಧರಿಸಿದರೆ, ಆನಂತರ ನಿಧಿಯನ್ನು ಹೊಂದುವ ಅವಕಾಶ ನಿಧಿ ಶೋಧಕನ ಪಾಲಾಗುತ್ತದೆ.

Leave a Reply

Your email address will not be published. Required fields are marked *