ರೈತರಿಗೆ ಬಿಗ್ ಶಾಕ್ ನೀಡಿದ ರಾಜ್ಯ ಸರ್ಕಾರ : `ಸಾಲ ಮನ್ನಾ’ ಯೋಜನೆಗೆ ಬಿತ್ತು ಬ್ರೇಕ್?

ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಬಿಗ್ ಶಾಕಿಂಗ್ ನ್ಯೂಸ್ ನೀಡಿದ್ದು, ಲೋಕೋಪಯೋಗಿ ಇಲಾಖೆಯ ಸುಮಾರು 9 ಸಾವಿರ ಕೋಟಿ ರೂ. ಮೊತ್ತದ 6,025 ಕಾಮಗಾರಿಗಳಿಗೆ ತಡೆಯೊಡ್ಡಿದ ಬೆನ್ನಲ್ಲೇ, ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೂ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ ಎನ್ನಲಾಗಿದೆ.

 

ರಾಜ್ಯ ಸರ್ಕಾರದ ಈ ಕ್ರಮದಿಂದ ರಾಜ್ಯದ ಸಹಕಾರಿ ಬ್ಯಾಂಕ್ ಗಳಿಗೆ ಸಂಕಷ್ಟ ಎದುರಾಗಿದ್ದು, ರೈತರಿಗೆ ಹೊಸದಾಗಿ ಬೆಳೆ ಸಾಲ ವಿತರಣೆಗೂ ಹಣಕಾಸು ಕೊರತೆಯಾಗುವ ಆತಂಕ ಸೃಷ್ಟಿಯಾಗಿದೆ. ನೆರೆ ಅನಾಹುತ ನಿರ್ವಹಣೆಗೆ ಹಣ ಹೊಂದಿಸುವ ದೊಡ್ಡ ಸವಾಲು ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಹೀಗಾಗಿ, ರೈತರ ಸಾಲ ಮನ್ನಾ ಯೋಜನೆಯಡಿ ಮರುಪಾವತಿ ಮೊತ್ತ ಬಿಡುಗಡೆಯನ್ನು ಸರ್ಕಾರದ ಸೂಚನೆ ಮೇರೆಗೆ ಹಣಕಾಸು ಇಲಾಖೆ ತಡೆ ಹಿಡಿದಿದೆ ಎನ್ನಲಾಗಿದೆ.

 

ಸಹಕಾರಿ ಸಂಸ್ಥೆಗಳಲ್ಲಿ ಬೆಳೆ ಸಾಲ ಪಡೆದಿದ್ದ ರೈತರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡುವ ಘೋಷಣೆಯಂತೆ ಒಟ್ಟು 19,08, 580 ಖಾತೆಗಳಲ್ಲಿನ 9,448 ಕೋಟಿ ರೂ. ಸಾಲ ಮನ್ನಾ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಒಟ್ಟು 15,00,795 ಮಂದಿ ಮಾತ್ರ ಸಂಬಂಧ ಪಟ್ಟ ದಾಖಲೆಗಳೊಂದಿಗೆ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸಿದ್ದು, ಸರ್ಕಾರದ ಮೇಲಿನ ಸಾಲದ ಹೊರೆ ಸುಮಾರು 8 ಸಾವಿರ ಕೋಟಿ ರೂ.ಗಳಿಗೆ ಸೀಮಿತವಾಗಿದೆ.

 

ಈಗಾಗಲೇ ಸುಮಾರು 4,800 ಕೋಟಿ ರೂ. ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ ಗಳ ಮೂಲಕ ರೈತರ ಖಾತೆಗಳಿಗೆ ತಲುಪಿದೆ. ಸಾಲದ ಕಂತು ಮರು ಪಾವತಿ ಅವಧಿ ಆಧರಿಸಿ ಸುಮಾರು 1,450 ಕೋಟಿ ರೂ. ಬಿಡುಗಡೆಗೆ ಸಹಕಾರ ಇಲಾಖೆಯಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಈಗ ರಾಜ್ಯ ಸರ್ಕಾರದ ಸೂಚನೆ ಆಧರಿಸಿ ಹಣ ಬಿಡುಗಡೆಗೆ ತಡೆ ಒಡ್ಡಲಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *