‘ರಾಹುಲ್ ಗಾಂಧಿಗೆ ಕುಮಾರಸ್ವಾಮಿ ಅಪಮಾನ ಮಾಡಿದ್ದಾರೆ’

ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕೆಲವು ಶಾಸಕರ ಹೆಸರುಗಳನ್ನು ಕೈ ಬಿಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಅಪಮಾನ ಮಾಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ರಾಹುಲ್ ಗಾಂಧಿ ಅವರ ಮುಂದಾಳತ್ವದಲ್ಲಿ ನಡೆದಿದೆ. ಹೀಗಾಗಿ ಆ ಪಟ್ಟಿಯನ್ನು ಯಥಾವತ್ತಾಗಿ ಅಂಗೀಕರಿಸಬೇಕಿತ್ತು. ಇದರಲ್ಲಿ ಸುಧಾಕರ್, ಎಸ್.ಟಿ.ಸೋಮಶೇಖರ್, ಸುಬ್ಬಾರೆಡ್ಡಿ ಎಂಬ ಅವರ ಹುದ್ದೆಯ ಪ್ರಶ್ನೆಯಿಲ್ಲ.

ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಸಿದ್ದಗೊಂಡ ಪಟ್ಟಿ ಅಂಗೀಕಾರವಾಗಬೇಕಿತ್ತು ಎಂದು ಹೇಳಿದರು. ನಾವು ಯಾವುದೇ ನಿಗಮ ಮಂಡಳಿಗಳ ಹುದ್ದೆಯನ್ನು ಕೇಳಿರಲಿಲ್ಲ. ಇಂಥದ್ದೇ ಹುದ್ದೆ ಬೇಕು ಎಂಬ ಬೇಡಿಕೆಯನ್ನು ಇಟ್ಟಿರಲಿಲ್ಲ. ಚಿಕ್ಕಬಳ್ಳಾಪುರ ಭಾಗದಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಲು ಸಚಿವ ಸ್ಥಾನ ಬೇಕು ಎಂದು ಹೇಳಿದ್ದೆ.

ಆದರೆ ಅದು ಸಿಕ್ಕಿಲ್ಲ. ಈಗಲೂ ಕೂಡ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡುವ ಬಗ್ಗೆ ಪರಿಶೀಲನೆ ನಡೆಸಬೇಕು ಎಂದ ಅವರು, ನಿಗಮಮಂಡಳಿಗಳಲ್ಲಿ ತಾವು ಯವುದೇ ಹುದ್ದೆ ಕೇಳಿರಲಿಲ್ಲ. ರಾಹುಲ್‍ಗಾಂಧಿ ನೇತೃತ್ವದ ಸಭೆಯಲ್ಲಿ ನಮ್ಮನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿರುವುದು ತಿಳಿದುಬಂತು.

ಅದಕ್ಕೆ ಮುಖ್ಯಮಂತ್ರಿಯವರು ಒಪ್ಪಿಗೆ ಸೂಚಿಸಿಲ್ಲ. ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿದ್ದು, ಜೆಡಿಎಸ್‍ಗೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಹಾಗಂತ ಪ್ರತಿಯೊಂದು ವಿಷಯದಲ್ಲೂ ಜೆಡಿಎಸ್ ಮುಂದೆ ಮಂಡಿಯೂರಲು ಸಾಧ್ಯವಿಲ್ಲ. ನನ್ನ ಮಾತುಗಳನ್ನು ಯಾವ ರೀತಿ ಬೇಕಾದರೂ ಅರ್ಥೈಸಿಕೊಳ್ಳಬಹುದು ಎಂದು ಹೇಳಿದರು.

ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧಿಕಾರಿಗಳೇ ಸಾಕು ಎಂಬ ಧೋರಣೆಯನ್ನು ಮುಂದಿಟ್ಟುಕೊಂಡು ನಮ್ಮ ಹೆಸರನ್ನು ತಿರಸ್ಕರಿಸಿದ್ದಾರೆ. ಇದು ಸರಿಯಲ್ಲ. ರಾಜ್ಯದ ಆಡಳಿತ ನಡೆಸಲು ಮುಖ್ಯ ಕಾರ್ಯದರ್ಶಿಯವರೇ ಸಾಕು. ಮುಖ್ಯಮಂತ್ರಿ ಹುದ್ದೆ ಏಕೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ಕೆಲವು ಹಿರಿಯ ಅಧಿಕಾರಿಗಳು ನಿವೃತ್ತಿಯ ನಂತರ ನಿಗಮಮಂಡಳಿ ಹಾಗೂ ಇತರ ಆಯಕಟ್ಟಿನ ಸ್ಥಾನಗಳಿಗೆ ಬಂದುಕೂರಲು ಪ್ರಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕುವ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗೆ ಇರಬೇಕು ಎಂದರು. ವಿದ್ಯಾವಂತರು, ಯುವಕರಿಗೆ ಅವಕಾಶ ಸಿಕ್ಕಿಲ್ಲ. ಎಸ್ಸೆಸ್ಸೆಲ್ಸಿ ಪಾಸಾದವರು ಸಚಿವರಾಗಿದ್ದಾರೆ. ಅವರ ಬಳಿ ಎರಡುಮೂರು ಖಾತೆಗಳಿವೆ. ಹೈಕಮಾಂಡ್ ಜೊತೆ ಚರ್ಚೆ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಗೆ ‘ಅಖಾಡ’ ಆಯ್ದುಕೊಂಡ ಪ್ರಕಾಶ್ ರೈ

ನಟ, ನಿರ್ಮಾಪಕ, ನಿರ್ದೇಶಕ ಪ್ರಕಾಶ್ ರೈ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.  ಬೆಂಗಳೂರು ಸೆಂಟ್ರಲ್ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಮೂವರು ಬಿಜೆಪಿ ಶಾಸಕರಿದ್ದರೆ, 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.

ಈ ಕ್ಷೇತ್ರದಿಂದಲೇ ನಟ ಪ್ರಕಾಶ್ ರೈ ಅವರು ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಹೊರಟಿದ್ದಾರೆ.  ಪ್ರಕಾಶ್‍ರೈ ಅವರು ಪ್ರಧಾನಿ ನರೇಂದ್ರ ಮೋದಿ , ಅಮಿತ್ ಶಾ, ಬಿಜೆಪಿ ವಿರುದ್ಧದ ಹೇಳಿಕೆಗಳನ್ನು ನೀಡುವ ಮೂಲಕವೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು, ಹೊಸ ವರ್ಷದ ಆದಿಯಲ್ಲೇ ಲೋಕಸಭೆಗೆ ಸ್ಪರ್ಧಿಸುವ ಘೋಷಣೆ ಮಾಡಿದ್ದರಾದರೂ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಬಹಿರಂಗಪಡಿಸಿರಲಿಲ್ಲ, ಈಗ ಅವರು ಬಹುತೇಕ ಬೆಂಗಳೂರು ಸೆಂಟ್ರಲ್‍ನಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಜನವರಿ 1 ರಂದು ಪಕ್ಷೇತರ ಅಭ್ಯರ್ಥಿಯಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಾಶ್ ರೈ ಟ್ವೀಟ್ ಮಾಡಿದ್ದರು. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ, ನನ್ನ ಹೊಸ ಪಯಣಕ್ಕೆ ಬೆಂಬಲಿಸದ ಎಲ್ಲರಿಗೂ ಧನ್ಯವಾದಗಳು. ನಾನು ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಳಿಕ ಎಡಪಂಥೀಯರಲ್ಲಿ ಗುರುತಿಸಿಕೊಂಡಿದ್ದ ಪ್ರಕಾಶ್ ರೈ, ಜಸ್ಟ್ ಆಸ್ಕಿಂಗ್ ಎಂಬ ಹ್ಯಾಷ್ ಟಾಗ್ ಬಳಸಿ ಕೇಂದ್ರಸರ್ಕಾರ, ಬಿಜೆಪಿ ಹಾಗೂ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.  2008ರಲ್ಲಿ ರಚನೆಯಾಗಿರುವ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಿ. ಸಿ. ಮೋಹನ್ ಹಾಲಿ ಸಂಸದರಾಗಿದ್ದಾರೆ. 2019ರ ಚುನಾವಣೆಯಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಭಾರತದಲ್ಲಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ

ಭಾರತದಲ್ಲಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಬರೋಬ್ಬರಿ 700 ಕೋಟಿ ರೂಪಾಯಿ ವೆಚ್ಚ, 1.10 ಲಕ್ಷ ಅಭಿಮಾನಿಗಳು ಪಂದ್ಯ ವೀಕ್ಷಿಸೋ ಸಾಮರ್ಥ್ಯ, 63 ಎಕರೆ ಪ್ರದೇಶ..ಇದೇ ಈ ಕ್ರೀಡಾಂಗಣದ ಹೈಲೈಟ್ಸ್. ಈ ಕ್ರೀಡಾಂಗಣ ನಿರ್ಮಾಣವಾಗುತ್ತಿರುವುದು ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ.

ವಿಶ್ವದ ಅತೀ ದೊಡ್ಡ ಕ್ರೀಡಾಂಗಣ ಇದೀಗ ಭಾರತದಲ್ಲಿ ನಿರ್ಮಾಣವಾಗುತ್ತಿದೆ. ಸದ್ಯ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನ ಅತೀ ದೊಡ್ಡ ಕ್ರಿಕೆಟ್ ಮೈದಾನ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಈ ದಾಖಲೆಯನ್ನ ಭಾರತ ಮುರಿಯಲಿದೆ. ಇತರ ಎಲ್ಲಾ ಕ್ರಿಕೆಟ್ ಮೈದಾನಕ್ಕಿಂತ ದೊಡ್ಡ ಮೈದಾನ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ.

ಗುಜರಾತ್‌ನ ಮೊಟೆರಾದ ಮೈದಾನ ಹೊಸ ರೂಪ ತಾಳುತ್ತಿದೆ. ಗುಜರಾತ್ ಕ್ರಿಕೆಟ್ ಸಂಸ್ಥೆ ಇದೀಗ ಐತಿಹಾಸಿಕ ಕ್ರೀಡಾಂಗಣ ನಿರ್ಮಿಸುತ್ತಿದೆ. ಮೊಟೆರಾ ಕ್ರೀಡಾಂಗಣವನ್ನ ಮೇಲ್ದರ್ಜೆಗೆ ಏರಿಸಲಾಗುತ್ತಿದೆ.  2017ರಿಂದ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಗುಜರಾತ್ ಕ್ರಿಕೆಟ್ ಸಂಸ್ಥೆ ಉಪಾಧ್ಯಕ್ಷ ಪರಿಮಾಲ್ ನಥ್ವಾನಿ ಇತ್ತೀಚೆಗೆ ಕ್ರೀಡಾಂಗಣ ನಿರ್ಮಾಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದಾರೆ.

ನೂತನ ಕ್ರೀಡಾಂಗಣದ ನಿರ್ಮಾಣ ವೆಚ್ಚ ಒಟ್ಟು 700 ಕೋಟಿ ರೂಪಾಯಿ. ವಿಶೇಷ ಅಂದರೆ 1.10 ಲಕ್ಷ ಅಭಿಮಾನಿಗಳು ಕುಳಿತ ಪಂದ್ಯವನ್ನ ವೀಕ್ಷಿಸಬಹುದು. ಈ ಕ್ರೀಡಾಂಗಣ ಒಟ್ಟು 63 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಇದು ದೇಶದ ಹೆಮ್ಮೆಯ ಕ್ರೀಡಾಂಗಣವಾಗಲಿದೆ ಎಂದು ಪರಿಮಾಲ್ ಹೇಳಿದ್ದಾರೆ.

ಗುಜಾರಾತ್‌ನಲ್ಲಿ ಈಗಾಗಲೇ ವಿಶ್ವದ ಅತೀ ದೊಡ್ಡ ಪ್ರತಿಮೆ ನಿರ್ಮಿಸಿ ದಾಖಲೆ ಬರೆಯಲಾಗಿದೆ. ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುವ, ದೇಶದ ಏಕತೆಗೆ ಶ್ರಮಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆ ನಿರ್ಮಿಸಿಲಾಗಿದೆ. ಈ ಮೂಲಕ ಇತರ ಪ್ರತಿಮೆಗಳ ದಾಖಲೆ ಬ್ರೇಕ್ ಮಾಡಲಾಗಿದೆ. ಇದೀಗ ಕ್ರೀಡಾಂಗಣದಲ್ಲೂ ಗುಜಾರಾತ್ ದಾಖಲೆ ಬರೆಯಲಿದೆ.

ಜಯಲಲಿತಾ ಜೀವನಾಧಾರಿತ ಚಿತ್ರ ‘ದಿ ಐರನ್​ ಲೇಡಿ’ ಫಸ್ಟ್ ಲುಕ್ ಬಿಡುಗಡೆ

ತಮಿಳು ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಲು ಸಿದ್ಧವಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನಾಧಾರಿತ ಚಿತ್ರ ‘ದಿ ಐರನ್ ಲೇಡಿ’ ಫಸ್ಟ್ ಲುಕ್ ಶನಿವಾರ  ಬಿಡುಗಡೆಯಾಗಿದೆ.

ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಜೀವನಾಧಾರಿತ ಚಿತ್ರ ದಿ ಆ್ಯಕ್ಸಿಡೆಂಟಲ್‌ ಪ್ರೈಮ್​​ ಮಿನಿಸ್ಟರ್‌ ಸಿನಿಮಾ ಭಾರಿ ಸುದ್ದಿಗೆ ಗ್ರಾಸವಾಗಿರುವ ಬೆನ್ನಲ್ಲೇ ಚಿತ್ರನಟಿ ಹಾಗೂ ತಮಿಳುನಾಡು ಮಾಜಿ ಸಿಎಂ ದಿ.ಜಯಲಲಿತಾರ ಎರಡನೇ ವರ್ಷದ ಪುಣ್ಯತಿಥಿ ದಿನವೇ ಅವರ ಜೀವನಾಧಾರಿತ ಚಿತ್ರ ‘ದಿ ಐರನ್​ ಲೇಡಿ’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.

ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕಿ ಪ್ರಿಯದರ್ಶಿನಿ ಅವರು, “ನನಗೆ ಜಯಲಲಿತಾ ಎಂದರೆ ಬಹಳ ಇಷ್ಟ. ಕೇವಲ 2ವರ್ಷದ ಹಿಂದೆ ನಿಧನರಾದ ಅವರ ಕುರಿತು ಸಿನಿಮಾ ಮಾಡೋದು ಒಂದು ಸವಾಲು, ಅದರಲ್ಲೂ ಒಬ್ಬ ವಿವಾದಾತ್ಮಕ ವ್ಯಕ್ತಿಯ ಜೀವನಚರಿತ್ರೆಯನ್ನ ತೆರೆ ಮೇಲೆ ತರೋದು ಕೂಡ ಅಷ್ಟೇ ಕಷ್ಟಸಾಧ್ಯ. ನನ್ನ ಪರಿಸ್ಥಿತಿ ಈಗ ತೆಳುವಾದ ಮಂಜಿನ ಮೇಲೆ ನಡೆಯುವಂತಿದೆ. ಆದರೂ ಜಯಲಲಿತಾ ಎಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದನ್ನು ನಾವೆಂದೂ ಮರೆಯುವಂತಿಲ್ಲ” ಎಂದಿದ್ದಾರೆ.

ಚಿತ್ರದಲ್ಲಿ ಜಯಲಲಿತಾ ಅವರ ಪಾತ್ರದಲ್ಲಿ ನಟಿ ನಿತ್ಯ ಮೆನನ್ ಅಭಿನಯಿಸುತ್ತಿದ್ದು, ಥೇಟ್ ಜಯಲಲಿತಾ ಅವರಂತೆ ಕಾಣುತ್ತಾರೆ. ಜಯಲಲಿತಾ ಅವರ ಬಾಲ್ಯದಿಂದ ಅವರು ಕೊನೆಯುಸಿರೆಳೆವವರೆಗಿನ ಅವರ ಜೀವನದ ಸಂಪೂರ್ಣ ವಿವರ ಚಿತ್ರದಲ್ಲಿ ಕಾಣಬಹುದು. ಈಗಾಗಲೇ ಚಿತ್ರದ ಶೂಟಿಂಗ್ ಹೈದರಾಬಾದ್’ನಲ್ಲಿರುವ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರ ತೆರೆ ಕಾಣಲಿದೆ.

ಆರ್ ಬಿಐ 2000 ರು. ಮುಖಬೆಲೆಯ ನೋಟುಗಳ ಮುದ್ರಣ ಸಂಪೂರ್ಣ ಸ್ಥಗಿತ!

ನವೆಂಬರ್ 2016ರಲ್ಲಿ ನೋಟು ಅಮಾನ್ಯೀಕರಣದ ವೇಳೆ ಬಂದ 2 ಸಾವಿರ ರುಪಾಯಿ ನೋಟು ಮುದ್ರಿಸುವುದನ್ನು ಆರ್ ಬಿಐ ನಿಲ್ಲಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
2000 ರುಪಾಯಿ ನೋಟಿನ ಚಲಾವಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ನೋಟಿನ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಷ್ಟು ಪ್ರಮಾಣದ ನೋಟು ಚಲಾವಣೆಯಲ್ಲಿರಬೇಕು ಎಂಬುದರ ಬಗ್ಗೆ ಆರ್ ಬಿಐ ಹಾಗೂ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ.
2016 ರಲ್ಲಿ ಕಪ್ಪುಹಣವನ್ನು ತಡೆಯುವ ಉದ್ದೇಶದೊಂದಿಗೆ ದೇಶದಲ್ಲಿ 500 ರು ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣಗೊಳಿಸಲಾಗಿತ್ತು. ಈ ವೇಳೆ ಸಾವಿರ ರು.ಗೆ ಬದಲಾಗಿ  2 ಸಾವಿರದ ನೋಟನ್ನು ಚಲಾವಣೆಗೆ ತರಲಾಗಿತ್ತು.

ನೋಟು ರದ್ದತಿ ಬಳಿಕ ಮಾರ್ಚ್​, 2018 ರವರೆಗೆ ದೇಶದಲ್ಲಿ ಒಟ್ಟು 18.03 ಲಕ್ಷ ಕೋಟಿ ರೂ. ಕರೆನ್ಸಿ ಚಲಾವಣೆಯಲ್ಲಿದ್ದು, ಇದರಲ್ಲಿ 6.73 ಲಕ್ಷ ಕೋಟಿ ರೂ. ಅಥವಾ ಶೇ.37ರಷ್ಟು 2,000 ರೂ. ನೋಟುಗಳು ಎಂಬುದು ವಿಶೇಷ. ಹಾಗೆಯೇ 7.73 ಲಕ್ಷ ಕೋಟಿ ರೂ. ಮೌಲ್ಯದ 500 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದೆ.

ಉ.ಪ್ರ.ದಲ್ಲಿ ಕಾಂಗ್ರೆಸ್‌ ಇಲ್ಲದ ಮೈತ್ರಿಕೂಟ

ಲೋಕಸಭೆ ಚುನಾವಣೆಗಾಗಿ ರಂಗ ಸಜ್ಜಿಕೆ ಬಿರುಸಾಗಿದೆ. ಬಿಹಾರದಲ್ಲಿ ಜೆಡಿಯು-ಬಿಜೆಪಿ ನಡುವೆ ಸ್ಥಾನ ಹೊಂದಾಣಿಕೆ ಪೂರ್ತಿಯಾದ ಬಳಿಕ ಇದೀಗ ಉತ್ತರ ಪ್ರದೇಶದಲ್ಲಿ ಮತ್ತೂಂದು ಮೈತ್ರಿಕೂಟ ಸ್ಥಾನ ಹೊಂದಾಣಿಕೆ ಪೂರ್ಣ ಗೊಳಿಸಿದೆ. ನಿರೀಕ್ಷೆಯಂತೆಯೇ 80 ಸ್ಥಾನ ಗಳಿರುವ ಉತ್ತರ ಪ್ರದೇಶದಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಸ್ಥಾನ ಹೊಂದಾಣಿಕೆ ಮಾಡಿ ಕೊಂಡಿವೆ. ಅಲ್ಲಿ ಕಾಂಗ್ರೆಸ್‌ ಈ ಮೈತ್ರಿಕೂಟದ ಭಾಗವಾಗಿಲ್ಲ.

ಕಾಂಗ್ರೆಸ್‌ ಹೊರಕ್ಕೆ: ಉತ್ತರ ಪ್ರದೇಶದಲ್ಲಿನ ಮಹಾಮೈತ್ರಿಕೂಟದಿಂದ ಕಾಂಗ್ರೆಸ್‌ ಹೊರಗುಳಿಯಲಿದೆ ಎಂಬ ಸುದ್ದಿ ನಿಜವಾಗಿದೆ. 80 ಕ್ಷೇತ್ರಗಳಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಸ್ಪರ್ಧಿಸಲಿವೆ. ತಾತ್ವಿಕವಾಗಿ ಈ ಬಗ್ಗೆ ಒಪ್ಪಿಕೊಳ್ಳಲಾಗಿದೆ. ಯಾವ ಪಕ್ಷ ಎಷ್ಟು ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸುತ್ತದೆ ಎನ್ನುವುದನ್ನು ಶೀಘ್ರ ಪ್ರಕಟಿಸಲಾಗುತ್ತದೆ ಎಂದು ಎಸ್‌ಪಿ ನಾಯಕ ರಾಜೇಂದ್ರ ಚೌಧರಿ ಹೇಳಿದ್ದಾರೆ. ಮೂಲಗಳನ್ನು ಉಲ್ಲೇಖೀಸಿ “ನ್ಯೂಸ್‌ 18′ ವರದಿ ಮಾಡಿರುವ ಪ್ರಕಾರ ಎಸ್‌ಪಿ, ಬಿಎಸ್‌ಪಿ ತಲಾ 37 ಸ್ಥಾನಗಳಲ್ಲಿ ಸ್ಪರ್ಧಿ ಸಲು ಮುಂದಾಗಿವೆ. ಜತೆಗೆ ಕೇಂದ್ರದ ಮಾಜಿ ಸಚಿವ ಅಜಿತ್‌ ಸಿಂಗ್‌ರ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಕೂಡ ಮೈತ್ರಿಕೂಟದಲ್ಲಿ ಇರಲಿದೆ. ಅದಕ್ಕೆ 2 ಸ್ಥಾನ ಸಿಗಲಿವೆ. ಮಥುರಾದಿಂದ ಅಜಿತ್‌ ಸಿಂಗ್‌ ಪುತ್ರ ಜಯಂತ್‌ ಸಿಂಗ್‌, ಭಾಗ³ತ್‌ ನಿಂದ ಅಜಿತ್‌ ಸಿಂಗ್‌ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.

ನಾವು ಸಿದ್ಧ: ಕಾಂಗ್ರೆಸ್‌ಗೆ ಈ ಬೆಳವಣಿಗೆ ಹಿನ್ನಡೆಯಾಗಿದೆ. ಆದರೂ, ರಾಜ್ಯ ಸಭಾ ಸದಸ್ಯ ಪಿ.ಎಲ್‌.ಪೂನಿಯಾ, “ಕಾಂಗ್ರೆಸ್‌ ಏಕಾಂಗಿ ಯಾಗಿ ಸ್ಪರ್ಧಿಸಲಿದೆ. ಚುನಾವಣೆಗೆ ಪಕ್ಷದ ಕಾರ್ಯ ಕರ್ತರು ಸಿದ್ಧರಾಗಿದ್ದಾರೆ’ ಎಂದು ಹೇಳಿದ್ದಾರೆ.

20 ಸ್ಥಾನಗಳಲ್ಲಿ ಸ್ಪರ್ಧೆ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಜತೆಯಾಗಿ ಸ್ಪರ್ಧೆ ಮಾಡಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿರಬೇಕಾದರೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ. ಇತರ ಎಂಟು ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ನೀಡಲಾಗುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಪ್ರಫ‌ುಲ್‌ ಪಟೇಲ್‌ ಖಚಿತಪಡಿಸಿದ್ದಾರೆ.

9ಕ್ಕೆ ರ್ಯಾಲಿ: ಮೂರು ರಾಜ್ಯಗಳಲ್ಲಿ ಸಾಲ ಮನ್ನಾ ಮಾಡಿರುವ ಕಾಂಗ್ರೆಸ್‌ ಲೋಕಸಭೆ ಚುನಾವಣೆಗೂ ಅದೇ ಅಸ್ತ್ರ ಬಳಸಿಕೊಳ್ಳಲು ಮುಂದಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡಗಳಲ್ಲಿ ಕಿಸಾನ್‌ ಅಭಾರ್‌ ಎಂಬ ಶಿರೋನಾಮೆಯ ರ್ಯಾಲಿಗಳನ್ನು ರಾಹುಲ್‌ ನಡೆಸಲಿದ್ದಾರೆ. ಈ ಪೈಕಿ ಮೊದಲ ರ್ಯಾಲಿ ಜ.9ರಂದು ಜೈಪುರದಲ್ಲಿ ನಡೆಯಲಿದೆ.

ಪ್ರಯಾಗ್‌ರಾಜ್‌ಗೆ ರಾಹುಲ್‌ ಭೇಟಿ?
ಕುಂಭ ಮೇಳಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬೇಟಿ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಸುಳಿವು ನೀಡಿದ ಪಕ್ಷದ ವಕ್ತಾರ ನದೀಂ ಜಾವೆದ್‌ “ರಾಹುಲ್‌ ಗಾಂಧಿ ತಾವು ನಂಬಿಕೊಂಡ ಧಾರ್ಮಿಕ ನಂಬಿಕೆಗಳಿಗೆ ಬದ್ಧರಾಗಿ ದ್ದಾರೆ. ಜವಾಹರ್‌ಲಾಲ್‌ ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ ಅಧ್ಯಕ್ಷರಿಗೆ ಸಮಯವಿದ್ದರೆ ಅಲ್ಲಿಗೆ ಭೇಟಿ ನೀಡಲಿದ್ದಾರೆ’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಅತಿ ಕಡಿಮೆ ಬೆಲೆಗೆ ಪೆಟ್ರೋಲ್!

ದೇಶದಲ್ಲಿ ನಿರಂತರವಾಗಿ ಏರಿಕೆ ಕಂಡು ಮತ್ತೆ ಭಾರೀ ಪ್ರಮಾಣದಲ್ಲಿ ತೈಲ ದರ ಇಳಿದಿತ್ತು. ಇದೀಗ ರಾಜ್ಯದಲ್ಲಿ ಮತ್ತೆ ಪೆಟ್ರೋಲ್ ಡೀಸೆಲ್ ದರದಲ್ಲಿ ಏರಿಕೆಯಾಗಿದೆ. ಈ ಸಂಬಮಧ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ ನಮ್ಮಲ್ಲಿನ ದರವೇ ದೇಶದಲ್ಲೇ ಕಡಿಮೆ ಎಂದು ಹೇಳಿದ್ದಾರೆ.

ಸಿನಿಮಾ ನಟರ ಮೇಲೆ ನಡೆದ ಐಟಿ ದಾಳಿ ಕೇಂದ್ರದ ತೆರಿಗೆ ಇಲಾಖೆ ನಿರ್ಧಾರವಾದುದು. ಅದರಲ್ಲಿ ಯಾವುದೇ ರೀತಿ ವಿಶೇಷತೆ ಇಲ್ಲ ಎಂದು  ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ತೆರಿಗೆ ವಂಚನೆ ಹಾಗೂ ತೆರಿಗೆ ಪಾವತಿ ಮೇಲೆ ಅನುಮಾನ ಮೂಡಿದಲ್ಲಿ ದಾಳಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಇದೇ ವೇಳೆ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿನ ಏರಿಕೆ ಸಂಬಂಧ ಪ್ರತಿಕ್ರಿಯಿಸಿದ ಸಿಎಂ, ಪೆಟ್ರೋಲ್, ಡೀಸೆಲ್ ಬೆಲೆ ಕೇಂದ್ರ ಸರ್ಕಾರ ಇಳಿಸಿಲ್ಲ. ಆದರೆ ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ಅತ್ಯಂತ ಕಡಿಮೆ ಇದೆ. ನಾವು ತೆರಿಗೆ ಏರಿಸಿದರೂ ನಮ್ಮ ಪಕ್ಕದ ರಾಜ್ಯಗಳಿಗೆ ಹೊಲಿಕೆ ಮಾಡಿದರೆ ನಮ್ಮ ದರ ಅತ್ಯಂತ ಕಡೆಮೆ ಪ್ರಮಾಣದಲ್ಲಿದೆ ಎಂದರು.

ಸಾಲಮನ್ನಾ :  ಇನ್ನು ರಾಜ್ಯದಲ್ಲಿ ರೈತರ ಸಾಲಮನ್ನಾಗಾಗಿ ಯಾವುದೇ ಯೋಜನೆಯಿಂದಲೂ ಕೂಡ ಹಣ ಪಡೆದುಕೊಳ್ಳುತ್ತಿಲ್ಲ. ಈಗಾಗಲೇ ಸಾಲಮನ್ನಾಗಾಗಿ 6500 ಕೋಟಿ ಹಣವನ್ನು ಮೀಸಲಿಟ್ಟಿದ್ದಾಗಿ ಈ ವೇಳೆ ತಿಳಿಸಿದರು.

ರಾಜೀನಾಮೆ ನೀಡುತ್ತಾರಾ ರಾಜ್ಯದ ಮತ್ತೋರ್ವ ಸಚಿವ..?

ರಾಜ್ಯದ ಸಮ್ಮಿಶ್ರ ಸರ್ಕಾರದ ಮಂತ್ರಿಯೋರ್ವರು ರಾಜೀನಾಮೆ ನೀಡಬೇಕೆಂದು ಆಗ್ರಹ ಕೇಳಿಬಂದಿದೆ. ಸಚಿವ ಪುಟ್ಟರಂಗಶೆಟ್ಟಿ ಆಪ್ತ ಬಳಿ ಲಕ್ಷ ಲಕ್ಷ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು ಲೂಟಿ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿಗಳು ಸಿಗುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, ಸಚಿವ ಪುಟ್ಟರಂಗ ಶೆಟ್ಟಿ ಪಿಎ  ಮೋಹನ್ ಹಣ ಸಾಗಿಸುವಾಗ ಸಿಕ್ಕಿ ಬಿದ್ದಿದ್ದಾನೆ. ಈ ನಿಟ್ಟಿನಲ್ಲಿ ತಕ್ಷಣವೇ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡಬೇಕು. ಸಿಎಂ ಕುಮಾರಸ್ವಾಮಿ ನೈತಿಕ ಹೊಂಎ ಹೊತ್ತು ಸಚಿವ ಸ್ಥಾನದಿಂದ ಪುಟ್ಟರಂಗಶೆಟ್ಟಿಯವರನ್ನು ಕೈ ಬಿಡಬೇಕು ಎಂದು ಹೇಳಿದರು. 

ಪ್ರಧಾನಿ  ನರೇಂದ್ರ ಮೋದಿಯವರು 10 ಪರ್ಸೆಂಟ್ ಸರ್ಕಾರ ಎಂದಿದ್ದರು. ಇದು 20 ಪರ್ಸೆಂಟ್ ಸರ್ಕಾರ ಎಂದು ಸಾಬೀತಾಗಿದೆ. ಮೋಹನ್ ಹಣ ತೆಗೆದುಕೊಂಡು ಸಚಿವರ ಮನೆಗೆ ಹೋಗುವಾಗ ಸಿಕ್ಕಿ ಬಿದ್ದಿದ್ದು, ಇದರಿಂದ ಡೀಲ್  ಮಾಡಿರುವುದು ಪತ್ತೆ ಯಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ರಫೆಲ್ ಡೀಲ್ ನಡೆದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ವೀರಪ್ಪ ಮೊಯ್ಲಿ ಯವರು ರಾಹುಲ್ ಗಾಂಧಿಯನ್ನು ಸಮರ್ಥಿಸಿ ಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ದೂರುತ್ತಿದ್ದಾರೆ. ಆದರೆ ರಾಜ್ಯದಲ್ಲಿಯೇ  ದೊಡ್ಡ ದೊಡ್ಡ ಲೂಟಿಗಳಾಗುತ್ತಿವೆ ಎಂದರು.

ತೈಲದರ ಏರಿಕೆ ಸಮಂಜಸವಲ್ಲ :
ಇನ್ನು ರಾಜ್ಯದಲ್ಲಿ ಪೆಟ್ರೋಲ್ ,ಡಿಸೆಲ್ ಮೇಲಿನ ತೆರಿಗೆ ಏರಿಕೆಯ ಬಗ್ಗೆಯೂ ಪ್ರತಿಕ್ರಿಯಿಸಿದ ಬಿಎಸ್ ವೈ  ದರ ಹೆಚ್ಚಳ ಮಾಡುತ್ತಿರುವುದು ಸಿಎಂ ಕುಮಾರಸ್ವಾಮಿ ಗೆ ಶೋಭೆ ತರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಸಿದರೂ ಈ ಸರ್ಕಾರ ಹೆಚ್ಚು ಮಾಡುತ್ತಿರುವುದು  ಸರಿಯಲ್ಲ ಎಂದರು.

ಸಾಲಮನ್ನಾ ಅನುಕೂಲ ಸಿಗುತ್ತಿಲ್ಲ :  ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಸಿಎಂ ಹೇಳಿದ್ದರೂ, ರೈತರಿಗೆ ಯೋಜನೆಯ ಅನುಕೂಲ ದೊರೆಯುತ್ತಿಲ್ಲ. ಇದರಿಂದ ರೈತರ ಆತ್ಮಹತ್ಯೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬದುಕಿದ್ದೂ ಕೂಡ ಸತ್ತಂತಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಜನತೆಗೆ ಮೈತ್ರಿ ಸರ್ಕಾರದಿಂದ ಮತ್ತೊಂದು ಶಾಕ್..!

ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಪರಿಷ್ಕರಿಸಿ ಗ್ರಾಹಕರಿಗೆ ಹೊಸ ವರ್ಷದ ಬಿಸಿ ಮುಟ್ಟಿಸಿದ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಳ ಮಾಡುವ ಮೂಲಕ ಜನತೆಗೆ ಡಬಲ್ ಶಾಕ್ ಕೊಡಲು ಮುಂದಾಗಿದೆ.  ಸಾರಿಗೆ ಸಂಸ್ಥೆಗಳು ನಷ್ಟದ ಹಳಿಯಲ್ಲಿ ಇರುವ ಕಾರಣ ಸರಿದೂಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶೇ.10ರಿಂದ 12ರಷ್ಟು ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಅಧಿಕೃತ ಆದೇಶ ಶೀಘ್ರದಲ್ಲಿ ಹೊರಬೀಳಲಿದೆ.

ಕಳೆದ ವಾರವಷ್ಟೇ ಬಸ್ ದರವನ್ನು ಹೆಚ್ಚಳ ಮಾಡಬೇಕೆಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು.  ಈಗಾಗಲೇ ಸಿಎಂ ಕುಮಾರಸ್ವಾಮಿ ಅವರು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು, ಬಿಎಂಟಿಸಿ, ವಾಯುವ್ಯ, ಈಶಾನ್ಯ, ನೈರುತ್ಯ ಮತ್ತು ಆಗ್ನೇಯ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ದರ ಏರಿಕೆ ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹೀಗಾಗಿ ಒಂದೆರಡು ದಿನಗಳಲ್ಲಿ ಸರ್ಕಾರಿ ಸಾರಿಗೆ ಬಸ್ ದರವನ್ನು ಶೇ.10ರಿಂದ 12ರಷ್ಟು ಏರಿಕೆ ಮಾಡುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಸಾರಿಗೆ ಇಲಾಖೆಯು ಶೇ.18ರಷ್ಟು ದರವನ್ನು ಪರಿಷ್ಕರಣೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಆದರೆ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಮಾಡಿದರೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬಹುದೆಂಬ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚರಿಕೆ ಹೆಜ್ಜೆ ಇಟ್ಟಿದೆ.

ಬಿಎಂಟಿಸಿ ಹೊರತುಪಡಿಸಿದರೆ ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ಸುಮಾರು 650 ಕೋಟಿ ನಷ್ಟದಲ್ಲಿವೆ. ಇಲ್ಲಿ ಸಿಬ್ಬಂದಿಗೆ ಸಕಾಲಕ್ಕೆ ಸರಿಯಾಗಿ ವೇತನವನ್ನು ಕೊಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪ್ರಯಾಣದ ದರವನ್ನು ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಡೀಸೆಲ್ ದರ ಪ್ರತಿ ಲೀಟರ್‍ಗೆ 53 ರೂ. ಇದ್ದಾಗ ಬಸ್ ದರವನ್ನು ಹೆಚ್ಚಳ ಮಾಡಲಾಗಿತ್ತು. ಈಗ ಡೀಸೆಲ್ ದರ ಲೀಟರ್‍ಗೆ 70 ರೂ. ಏರಿಕೆಯಾಗಿದ್ದರೆ ಟಿಕೆಟ್ ದರ ಮಾತ್ರ ಯಥಾಸ್ಥಿತಿಯಲ್ಲಿದೆ.

ಕಳೆದ 15 ದಿನಗಳಲ್ಲಿ ಲೀಟರ್‍ಗೆ 20 ಪೈಸೆ, 30 ಪೈಸೆ, 50 ಪೈಸೆ ಹಾಗೂ ಒಂದು ರೂ. ಕಡಿಮೆಯಾಗಿದ್ದರಿಂದ ಇಂದು ಡೀಸೆಲ್ ದರ 64 ರೂ.ಗೆ ಬಂದಿದೆ. ಇದರ ಜೊತೆಗೆ ಶುಕ್ರವಾರವಷ್ಟೇ ರಾಜ್ಯ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಪರಿಷ್ಕರಣೆ ಮಾಡಿ ಹೆಚ್ಚಳ ಮಾಡಿದೆ. ಹೀಗಾಗಿ ಬಸ್ ಪ್ರಯಾಣ ದರವನ್ನು ಏರಿಕೆ ಮಾಡದಿದ್ದರೆ ಸಂಸ್ಥೆಯನ್ನು ನಿರ್ವಹಣೆ ಮಾಡುವುದು ಕಷ್ಟಕರ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಟ್ಟಿದ್ದರು.

ಈ ಎಲ್ಲಾ ಸಾಧಕ-ಬಾಧಕಗಳನ್ನು ಗಮನಿಸಿರುವ ಕುಮಾರಸ್ವಾಮಿ ಅವರು ಒಲ್ಲದ ಮನಸಿನಿಂದಲೇ ದರ ಏರಿಕೆಗೆ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಸಾರಿಗೆ ಇಲಾಖೆ ಬಸ್ ಪ್ರಯಾಣವನ್ನು ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಇದಕ್ಕೆ ಅನುಮೋದನೆ ನೀಡಿದ್ದರು. ಆದರೆ ಆ ಸಂದರ್ಭದಲ್ಲಿ ರಾಜ್ಯದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗಿತ್ತು.

ಚುನಾವಣಾ ಹೊಸ್ತಿಲಲ್ಲಿ ಬಸ್ ದರವನ್ನು ಏರಿಕೆ ಮಾಡಿದರೆ ಮತದಾರರ ಮುನಿಸಿಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದೆಂಬ ಭೀತಿಯಿಂದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ಹೊರಡಿಸಿದ ಆದೇಶವನ್ನು ಅಂದೇ ಹಿಂಪಡೆಯುವಂತೆ ಕುಮಾರಸ್ವಾಮಿ ಸೂಚಿಸಿದ್ದರು.

ಖಾಸಗಿ ಬಸ್ ಪ್ರಯಾಣದ ದರ ಹೆಚ್ಚಳ:
ಸರ್ಕಾರಿ ಬಸ್ ಪ್ರಯಾಣ ದರ ಏರಿಕೆಯಾದರೆ ಖಾಸಗಿಯವರೂ ಕೂಡ ಪ್ರಯಾಣ ದರವನ್ನು ಹೆಚ್ಚಳ ಮಾಡಲು ತೆರೆಮರೆಯಲ್ಲಿ ಸಜ್ಜಾಗಿದ್ದಾರೆ. ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಬಸ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಬಸ್ ಪ್ರಯಾಣ ದರ ಏರಿಕೆ ಮಾಡುವುದನ್ನೇ ತುದಿಗಾಲಲ್ಲಿ ನಿಂತು ಕಾಯುತ್ತಿರುವ ಖಾಸಗಿಯವರು ಮರುಕ್ಷಣವೇ ದರ ಹೆಚ್ಚಿಸಲು ಮುಂದಾಗಿದ್ದಾರೆ.

ಮೋದಿಗೆ ಮತ ಹಾಕಬೇಡಿ ಎಂದ ಮೋದಿ ಪತ್ನಿ ಜಶೋದಾಬೆನ್‌?

ಮೋದಿಗೆ ಮತ ಹಾಕಬೇಡಿ ಎಂದು ನರೇಂದ್ರ ಮೋದಿ ಪತ್ನಿ ಜಶೋದಾ ಬೇನ್‌ ಹೇಳಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜಕ್ಕೂ ಅವರು ಇಂತಹ ಮನವಿ ಮಾಡಿದ್ರಾ? ಇಲ್ಲಿದೆ ವಿವರ

2019ರಲ್ಲಿ ನರೇಂದ್ರ ಮೋದಿಗೆ ಮತ ಹಾಕದಂತೆ ಮೋದಿ ಪತ್ನಿ ಜಶೋದಾಬೆನ್‌ ಮನವಿ ಮಾಡಿಕೊಂಡಿದ್ದಾರೆ ಎಂದು ಒಕ್ಕಣೆ ಬರೆಯಲಾಗಿದೆ. ಆದರೆ ನಿಜಕ್ಕೂ ಜಶೋದಾಬೆನ್‌ ಹಾಗೆ ಹೇಳಿದ್ದಾರೆಯೇ ಎಂದು ಪರಿಶೀಲಿಸಿದಾಗ ವಾಸ್ತವ ಏನೆಂಬುದು ಪತ್ತೆಯಾಗಿದೆ.

‘ನಾನು ಜಶೋದಾಬೆನ್‌ ನರೇಂದ್ರ ಕುಮಾರ್‌ ಮೋದಿ, ಹೇಳುವುದೇನೆಂದರೆ ಗುಜರಾತ್‌ ದಿನಪತ್ರಿಯ ಮುಖಪುಟದಲ್ಲಿ ಪ್ರಕಟವಾದ ಸುದ್ದಿ ಸುಳ್ಳು. ಆನಂದಿಬೇನ್‌ ಅವರ ವರ್ತನೆಯು ನನಗೆ ಮತ್ತು ನನ್ನ ಪತಿಗೆ ನೋವುಂಟುಮಾಡಿದೆ. ನನ್ನ ಪತಿ ಶ್ರೀರಾಮನಿದ್ದಂತೆ. ಅವರನ್ನು ತೇಜೋವಧೆ ಮಾಡಿ ರಾಜಕಾರಣ ಮಾಡುವುದನ್ನು ನಿಲ್ಲಿಸಿ. ಜಶೋದಾಬೆನ್‌ ನಿಂದನೆ ದೇಶದ ಪ್ರಧಾನಿಯನ್ನು ನಿಂದಿಸಿದಂತೆ. ನನ್ನ ಪತಿ ಪ್ರಧಾನಮಂತ್ರಿಯಾದ ಬಳಿಕ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿ ಹೆಂಡತಿ ಹೆಸರಿರುವ ಜಾಗದಲ್ಲಿ ನನ್ನ ಹೆಸರು ಬರೆದಿದ್ದಾರೆ. ಅದನ್ನು ನೋಡಿಯೂ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿ ಬೇನ್‌ ಪಟೇಲ್‌ ‘ಮೋದಿ ಮದುವೆಯೇ ಆಗಿಲ್ಲ’ ಎಂದು ಬೇಜವ್ದಾರಿಯ ಹೇಳಿಕೆ ನೀಡಿದ್ದಾರೆ’ ಎಂದಿದೆ. ಎಲ್ಲಿಯೂ 2019ರಲ್ಲಿ ನರೇಂದ್ರ ಮೋದಿಗೆ ಮತ ಹಾಕಬೇಡಿ ಎಂದು ಹೇಳಿಲ್ಲ.